ವಿಚಿತ್ರವೆಸಪ ಚಿತ್ರ ಚತುರ ಇವನಾರು?!!
ಕವಿ:ಡಿವಿಜಿ 
ಮೇಲೆ ನೋಡೆ ಕಣ್ಣ ತಣಿಪ 
ನೀಲ ಪಟದಿ ವಿವಿಧ ರೂಪ 
ಜಾಲಗಳನು ಬಣ್ಣಿಸಿರ್ಪ 
    ಚಿತ್ರ ಚತುರನಾರ್ ।
ಕಾಲದಿಂದೆ ಮಾಸದಾ ವಿ 
    ಚಿತ್ರವೆಸಪನಾರ್ 

ಗಿರಿಯ ತೊರೆಯ ಬಣದ ಹೊಲದ 
ಬೆರಗಿನಿಂದೆ ಮೃಗದ ಖಗದ 
ಮೆರೆತದಿಂದಲೀ ವಿಹಾರ 
   ಭವನವೆಸಪನಾರ್ ।
ಮರೆಯಲಿರ್ದು ಸೊಗವನಿಂತು 
   ಕವಿಸುತಿರ್ಪನಾರ್ 

ಜ್ಯೋತಿಗಳನು ಗಗನ ತಲದಿ 
ಗೀತಗಳನು ವಿಹಗ ಮುಖದಿ 
ಪ್ರೀತಿಗಳನು ಜನರ ಮನದಿ 
    ತೋರುತ್ತಿರ್ಪನಾರ್ ।
ಮಾತನುಳಿದು ಕವಿತೆಯಿಂತು 
    ಬೀರುತ್ತಿರ್ಪನಾರ್ 

ಅವನ ಕೃತಿಯ ನೋಡಿ ಮಣಿವೆ 
ವವನ ದನಿಯ ಕೇಳಿ ನಲಿವೆ 
ವವನ ಭಿಕ್ಷೆಯುಂಡು ಬೆಳೆವೆ  
    ವವನನರಿಯೆವು ।
ಅವನ ಲೀಲೆಗಳನು ಕಾಣ್ಬೆ 
    ವವನ ಕಾಣೆವು 

ರವಿಗೆ ಬೆಳಕ ಭುವಿಗೆ ಬಲವ 
ಜವವ ವಾಯುಗೀವ ತೆರದಿ 
ಕವಿಯ ವಚನಕವನೆ ಸರಸ 
     ಭಾವವೀವನು ।
ಅವನೆ ಶಿಲ್ಪ ಚಿತ್ರ ಕೃತಿಗೆ 
     ಜೀವವೀವನು 

ಕಿರಿಯ ಮಕ್ಕಳಳುವ ದನಿಗೆ 
ಪಿರಿಯರಿಡುವ ಕಣ್ಣ ಪನಿಗೆ 
ಕರಗದೆದೆಯ ಬಿದಿಯು ಬಣಗು 
    ಕವಿತೆಗೊಲಿವನೇಂ ।
ಮರುಳು ನುಡಿಯಲಿದನು ನಿನ್ನ 
    ಕಿವಿಯೊಳುಲಿವನೇಂ 

ದೈವ ಕೃತಿಯ ಸೊಬಗ ಸರಸ 
ಭಾವಿತತಿಯ ಸೊಬಗ ಸುಜನ 
ಜೀವ ಕಥೆಯ ಸೊಬಗ ಬರಿಯ 
     ಕನಸವೆಂಬರೇಂ  ।
ಬೇವ ಮನವ ಸೊಬಗಿನೊಂದು 
     ನೆನಪೆ ತಣಿಸದೇಮ್ 
ಕವನ ಸಂಕಲನ- ನಿವೇದನ(1942)
ಪರ್ಜನ್ಯಕವನ ಸಂಕಲನ,'ನಿವೇದನ'((1942)) ಡಿ.ವಿಜಿ.

ನೋಡಿ
ಬಯಕೆ -(ಇಂಗ್ಲಿಷ್ ಕವನದ ಅನುವಾದ)
ಪ್ರಿಯತಮೆಗೆ
ನಿವೇದನ ಡಿ.ವಿ.ಜಿ.
ಜೋಗದ ಜೋಕು ಲಾವಣಿ
ಇವನಾರು! ಡಿ.ವಿ.ಜಿ.
ಪರಿವಿಡಿ

ಉಲ್ಲೇಖ
ವರ್ಗ:ಕನ್ನಡ ಸಾಹಿತ್ಯ